ಪೋಲಿಕಥೆ -
	ಜನಪದ ಕಥೆಯ ಒಂದು ಪ್ರಕಾರ. ಲೈಂಗಿಕ ವಸ್ತು ಇದರಲ್ಲಿಯ ಪ್ರಧಾನ ವಸ್ತು. ಈ ಕಥೆಗಳು ಮಾನವನ ಸಂಪ್ರದಾಯ ಮತ್ತು ಸಂಸ್ಕøತಿ ಬಗೆಗೆ ಒಳನೋಟ ನೀಡುತ್ತವೆ.
ಮಾನವನ ದೈಹಿಕ ಪ್ರವೃತ್ತಿಗೆ ಅನಿವಾರ್ಯ ಪೂರಕಗಳು ಎರಡು: ಆಹಾರ, ಲೈಂಗಿಕಾರ್ಷಣೆ. ಕಾಮಪ್ರಚೋದನೆ ಅವನ ಸಹಜ ಪ್ರವೃತ್ತಿ. ಹೆಣ್ಣು ಗಂಡು ಪರಸ್ಪರ ಆಕರ್ಷಿತರಾಗಿ ಬೆರೆತು ಸೊಗಸಿನಿಂದ ಆಡುವ ಸಂಭೋಗಕ್ರಿಯೆಯೇ ಲೈಂಗಿಕ ರಂಜನೆ. ಜನಪದ ಪೋಲಿಕಥೆಗಳಿಗೆ ಇದೇ ಮೇಟಿ ಅಥವಾ ಕೇಂದ್ರಬಿಂದು. ಇದನ್ನು ಸುತ್ತುವರಿದ ಗಂಡು ಹೆಣ್ಣುಗಳ ಸುಪ್ತ ಮತ್ತು ಜಾಗೃತ ಚಿತ್ರದ ಲೈಂಗಿಕ ಗುಣಗಳೂ ಭಾವನೆಗಳೂ, ಮನೋವಿಕಾರಗಳು, ಕೌಟುಂಬಿಕ ಜೀವನದೊಳಗೆ ಹೊರಗೆ ಸಮಾಜ ಜೀವನದ ಈಚೆ ಆಚೆ ನಡೆಯುವ ಶೋಭನ ಸಂಭೋಗಗಳು, ಶೀಲ ಅಶ್ಲೀಲದ ಸೆರಗುಹಿಡಿದ ರಾಗರಂಜನೆಗಳು, ಸೂಳೆಗಾರಿಕೆ ರಂಡೆಯರ ಠಕ್ಕಿನ ರತಿಕೂಟಗಳು, ಜೊತೆಗೆ ನಪುಂಸಕರ ಹಿಡಮಾಡಿಸಿಕೊಂಡವರ ಉದ್ರೇಕ ವರ್ತನೆಗಳು, ಬೇಧಗೊಂಡ ಗಂಡುಬೀರಿಯರ ಅತಿಭೋಗಗಳು ಸ್ತ್ರೀಪುರುಷರ ಯೋನಿಗಳ ಬಗೆಗಿನ ವಿಚಿತ್ರ ಕಲ್ಪನೆಗಳು- ಇನ್ನೂ ಹಲವು ಬಗೆಯ ವರ್ತನೆಗಳು ಈ ಕಥೆಗಳಲ್ಲಿ ಬರುತ್ತವೆ. 										(ಡಿ.ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ